ಶ್ರೀರಂಗಪಟ್ಟಣ
	ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರ-ದಕ್ಷಿಣ ಅಗಲವಾಗಿದ್ದು ಪೂರ್ವ-ಪಶ್ಚಿಮ ಕಿರಿದಾಗುತ್ತ ಹೋಗುವ ಈ ತಾಲ್ಲೂಕಿನ ಪೂರ್ವ ಮತ್ತು ಆಗ್ನೇಯದಲ್ಲಿ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕೂ ಪಶ್ಚಿಮ, ನೈಋತ್ಯ ಮತ್ತು ದಕ್ಷಿಣದಲ್ಲಿ ಅನುಕ್ರಮವಾಗಿ ಮೈಸೂರು ತಾಲ್ಲೂಕು, ಉತ್ತರದಲ್ಲಿ ಪಾಂಡವಪುರ ಮತ್ತು ಮಂಡ್ಯ ತಾಲ್ಲೂಕುಗಳು ಇವೆ. ಅರಕೆರೆ, ಬೆಳಗೊಳ, ಶ್ರೀರಂಗಪಟ್ಟಣ ಮತ್ತು ಕೆ. ಶೆಟ್ಟಿಹಳ್ಳಿ ಇದರ ಹೋಬಳಿಗಳು.  97 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 346.7 ಚ.ಕಿಮೀ.  ಜನಸಂಖ್ಯೆ 162,682.

	ತಾಲ್ಲೂಕಿನಲ್ಲಿ ಹುಲಿಕೆರೆ-ಕರಿಘಟ್ಟ ಶ್ರೇಣಿಗೆ ಸೇರಿದ ಕರಿಘಟ್ಟ ಬೆಟ್ಟ ಶ್ರೀರಂಗಪಟ್ಟಣದ ಹತ್ತಿರವಿದೆ. ಈ ಬೆಟ್ಟದ ಬುಡದಲ್ಲೇ ಲೋಕ ಪಾವನಿ ಬಾಬುರಾಯನಕೊಪ್ಪಲು ಬಳಿ ಕಾವೇರಿ ನದಿಯನ್ನು ಸೇರಿಕೊಳ್ಳು ವುದು. ತಾಲ್ಲೂಕಿನ ಮುಖ್ಯನದಿ ಕಾವೇರಿ. ಕೃಷ್ಣರಾಜಸಾಗರದ ಮೇಲುಗಡೆ ಹೇಮಾವತಿಯನ್ನು ಕೂಡಿಕೊಂಡು ಈ ನದಿ ಶ್ರೀರಂಗಪಟ್ಟಣ ತಾಲ್ಲೂಕನ್ನು ಪ್ರವೇಶಿಸುತ್ತದೆ. ತಾಲ್ಲೂಕಿನ ಉತ್ತರದಲ್ಲಿ ಸ್ವಲ್ಪ ದೂರ ಪಾಂಡವಪುರ ತಾಲ್ಲೂಕನ್ನು ಶ್ರೀರಂಗಪಟ್ಟಣ ತಾಲ್ಲೂಕಿನಿಂದ ಬೇರ್ಪಡಿಸಿ ಪೂರ್ವಾಭಿಮು ಖವಾಗಿ ಹರಿಯುವುದು. ಮುಂದೆ ಮಹದೇವಪುರದ ಬಳಿ ಆಗ್ನೇಯಾಭಿ ಮುಖವಾಗಿ ಹರಿದು ತಿರುಮಕೂಡಲು ನರಸೀಪುರ ತಾಲ್ಲೂಕನ್ನು ಪ್ರವೇಶಿಸುವುದು. ಉತ್ತಮ ಹವಾಮಾನವಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 547.40 ಮಿಮೀ.

	ಕಾವೇರಿ, ಲೋಕಪಾವನಿ ಈ ನದಿಗಳ ನೀರನ್ನು ತಾಲ್ಲೂಕಿನಲ್ಲಿ ಬಳಸಿಕೊಳ್ಳುತ್ತಿರುವುದಲ್ಲದೆ ವ್ಯವಸಾಯಕ್ಕೆ ಸಾಕಷ್ಟು ಜಲ ಪೂರೈಕೆ ಮಾಡುವ ವಿರಜಾ ನದಿ ಕಾಲುವೆ, ದೇವರಾಯ ಕಾಲುವೆ, ರಾಮಸ್ವಾಮಿ ಮತ್ತು ಚಿಕ್ಕದೇವರಾಯಸಾಗರ ಕಾಲುವೆಗಳು ತಾಲ್ಲೂಕಿನಲ್ಲಿ ಹರಡಿವೆ.  ಇತ್ತೀಚೆಗೆ ಯೋಜಿಸಲಾಗಿರುವ ಕರಿಘಟ್ಟ ನೀರೆತ್ತುಗ ಯೋಜನೆಯಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಸಾವಿರಾರು ಎಕರೆಗಳಿಗೆ ಜಲ ಪೂರೈಸಲಾಗುತ್ತಿದೆ. ಜಲ ಸಮೃದ್ಧಿಯನ್ನು ಹೊಂದಿರುವ ಈ ತಾಲ್ಲೂಕು ಫಲವತ್ತಾದ ಕೆಂಪು ಜೇಡಿಮಿಶ್ರಿತ ಮಣ್ಣಿನಿಂದ ಕೂಡಿದೆ. ಈ ತಾಲ್ಲೂಕಿನ ಮುಖ್ಯ ಬೆಳೆಗಳು ಬತ್ತ, ಕಬ್ಬು, ರಾಗಿ, ಜೊತೆಗೆ ಜೋಳ, ನೆಲಗಡಲೆ, ವಿವಿಧ ದ್ವಿದಳ ಧಾನ್ಯಗಳು. ಹರಳು ಬೆಳೆಯುತ್ತಾರೆ. ತೋಟಗಳಲ್ಲಿ ತೆಂಗು ಮತ್ತು ವಿವಿಧ ಫಲಗಳನ್ನು ಬೆಳೆಯುವುದುಂಟು. ವ್ಯವಸಾಯದ ಜೊತೆಗೆ ಪಶುಪಾಲನೆಯೂ ಮತ್ಸ್ಯೋದ್ಯಮವೂ ಅಭಿವೃದ್ಧಿಯಾಗುತ್ತಿದೆ.

	ಈ ತಾಲ್ಲೂಕಿನ ಬೆಳಗೊಳದಲ್ಲಿ ಮಂಡ್ಯ ನ್ಯಾಷನಲ್ ಪೇಪರ್ ಮಿಲ್ಸ್ (1962), ಮೈಸೂರ್‍ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ (1937), ಮೈಸೂರು ಕೆಮಿಕಲ್ ಮ್ಯಾನುಫ್ಯಾಕ್ಚರರ್ಸ್ (1941), ಅಲೈಡ್ ರೆಸಿನ್ಸ್ ಅಂಡ್ ಕೆಮಿಕಲ್ಸ್ (1965) ಕಾರ್ಖಾನೆಗಳಿದ್ದು ಕಾಗದ ಮತ್ತು ರಸಾಯನಿಕ ಗೊಬ್ಬರಗಳ ತಯಾರಿಕೆಯಿತ್ತು. ಶ್ರೀರಂಗಪಟ್ಟಣದಲ್ಲಿ ರೇಷ್ಮೆ ನೂಲು ಸಂಸ್ಕರಣ ಕೇಂದ್ರವಿದೆ. ಅರಕೆರೆ ಬಳಿ ಕಚ್ಚಾ ಕಾಗದದ ಕಾರ್ಖಾನೆಯೊಂದು ರೂಪುಗೊಂಡಿತ್ತು. ಇವಲ್ಲದೆ ಈ ತಾಲ್ಲೂಕಿನಲ್ಲಿ ಮೊದಲಿಂದಲೂ ಬೆಲ್ಲದ ತಯಾರಿಕೆ ಇದೆ. ಈ ತಾಲ್ಲೂಕಿನ ಕೊಡಿಯಾಲ ಕೈಮಗ್ಗದ ಬಟ್ಟೆಗಳಿಗೆ ಪ್ರಸಿದ್ಧ. ಶ್ರೀರಂಗಪಟ್ಟಣದಲ್ಲಿ ಜೇನುಸಾಕಣೆ ಕೇಂದ್ರವಿದೆ. ವ್ಯವಸಾಯದ ಉಪಕರಣಗಳ ತಯಾರಿಕೆಯುಂಟು. ಮೈಸೂರು-ಬೆಂಗಳೂರು, ಮೈಸೂರು-ಹಾಸನ ರೈಲುಮಾರ್ಗಗಳು ಈ ತಾಲ್ಲೂಕು ಮುಂಖಾಂತರ ಹಾದುಹೋಗಿವೆ.  ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಜೊತೆಗೆ ತಾಲ್ಲೂಕಿನ ಎಲ್ಲ ಕಡೆಗೂ ಉತ್ತಮ ಮಾರ್ಗ ಸಂಪರ್ಕವಿದೆ.

	ಶ್ರೀರಂಗಪಟ್ಟಣದ ನೈಋತ್ಯಕ್ಕೆ ಇರುವ ಪಶ್ಚಿಮವಾಹಿನಿ ಒಂದು ಪುಣ್ಯಕ್ಷೇತ್ರ ಮತ್ತು ರೈಲ್ವೆ ನಿಲ್ದಾಣ.  ಇಲ್ಲಿ ಕಾವೇರಿ ನದಿಯ ಒಂದು ಕವಲು ಪಶ್ಚಿಮಾಭಿಮುಖವಾಗಿ ಹರಿಯುವುದರಿಂದ ಪಶ್ಚಿಮ ವಾಹಿನಿ ಎಂಬ ಹೆಸರು ಬಂದಿದೆ. ಇಲ್ಲಿ ಬಂಗಾರದೊಡ್ಡಿ ಅಣೆಕಟ್ಟು ಮತ್ತು ಅನೇಕ ಛತ್ರಗಳು ಇದ್ದು ಧಾರ್ಮಿಕ ಕಾರ್ಯಗಳು ನಡೆಯುತ್ತಿರುತ್ತವೆ.  ಶ್ರೀರಂಗಪಟ್ಟಣದ ನೈಋತ್ಯಕ್ಕೆ 5 ಕಿಮೀ ದೂರದಲ್ಲಿರುವ ಪಾಲಹಳ್ಳಿ ಕಾವೇರಿನದಿಯ ಬಲದಂಡೆಯ ಮೇಲಿದೆ.  1871ರವರೆಗೂ ಮೈಸೂರು ಅಷ್ಟಗ್ರಾಮ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಆಗಿನ ಪ್ರಸಿದ್ಧ ಅಷ್ಟಗ್ರಾಮ ಶುಗರ್ ವಕ್ರ್ಸ್ ಸಕ್ಕರೆ ಕಾರ್ಖಾನೆ ಪಾಲಹಳ್ಳಿಯಲ್ಲಿ ನಡೆಯುತ್ತಿತ್ತು (1847-94).  ಇದರ ಹತ್ತಿರವೇ ಪ್ರಸಿದ್ಧ ರಂಗನತಿಟ್ಟು (ನೋಡಿ- ರಂಗನತಿಟ್ಟು-ಪಕ್ಷಿಧಾಮ) ಪಕ್ಷಿಧಾಮವಿದೆ.

	ಶ್ರೀರಂಗಪಟ್ಟಣ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಇತಿಹಾಸ ಪ್ರಸಿದ್ಧ ಪಟ್ಟಣ. ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕಾವೇರಿ ನದಿಯಿಂದ ಸುತ್ತುವರಿದಿರುವ ದ್ವೀಪ ಮತ್ತು ಒಂದು ಪುಣ್ಯಕ್ಷೇತ್ರ.  ಮಂಡ್ಯಕ್ಕೆ ನೈಋತ್ಯದಲ್ಲಿ 29 ಕಿಮೀ ದೂರದಲ್ಲೂ ಮೈಸೂರಿನ ಉತ್ತರಕ್ಕೆ 13 ಕಿಮೀ ದೂರದಲ್ಲೂ ಇದೆ.  ಜನಸಂಖ್ಯೆ 23448.

	ಸ್ಥಳಪುರಾಣದ ಪ್ರಕಾರ ಪೂರ್ವದಲ್ಲಿ ಗೌತಮ ಋಷಿ ಇಲ್ಲಿಯ ಆದಿರಂಗನನ್ನು ಪೂಜಿಸಿ ಇಲ್ಲಿ ವಾಸವಾಗಿದ್ದುದರಿಂದ ಇದಕ್ಕೆ ಗೌತಮಕ್ಷೇತ್ರವೆಂಬ ಹೆಸರಿತ್ತೆಂದು ತಿಳಿದುಬರುವುದು.  894ರಲ್ಲಿ ಗಂಗರ ಸಾಮಂತನಾದ ತಿರುಮಲಯ್ಯ ಇಲ್ಲಿಯ ರಂಗನಾಥಸ್ವಾಮಿ ದೇವಾಲಯ ವನ್ನು ಕಟ್ಟಿಸಿ ಇದಕ್ಕೆ ಶ್ರೀರಂಗಪುರವೆಂದು ಹೆಸರಿಟ್ಟನೆಂದು ಕೆಲವು ಶಾಸನಗಳಿಂದ ತಿಳಿದುಬರುತ್ತದೆ. 1117ರಲ್ಲಿ ವೈಷ್ಣವಧರ್ಮವನ್ನು ಅವಲಂಬಿಸಿದ ಅನಂತರ ಹೊಯ್ಸಳ ವಿಷ್ಣುವರ್ಧನ ರಾಮಾನುಜಾಚಾರ್ಯ ರಿಗೆ ಕಾವೇರೀತಿರದಲ್ಲಿ ಅಷ್ಟಗ್ರಾಮಗಳನ್ನು ಬಿಟ್ಟುಕೊಟ್ಟು ಈ ಗ್ರಾಮಗಳ ಮೇಲ್ವಿಚಾರಣೆಗೆ ಹೆಬ್ಬಾರರು ಅಥವಾ ಪ್ರಭುಗಳೆಂಬ ಅಧಿಕಾರಿಗಳನ್ನು ನಿಯಮಿಸಿದ.  1120ರಲ್ಲಿ ವಿಷ್ಣುವರ್ಧನನ ತಮ್ಮನಾದ ಉದಯಾದಿತ್ಯ ಕಾಡಿನಿಂದ ಆವೃತವಾಗಿದ್ದ ಈ ಸ್ಥಳದಲ್ಲಿ ಊರನ್ನು ನಿರ್ಮಿಸಿದ.  15 ಮತ್ತು 16ನೆಯ ಶತಮಾನಗಳಲ್ಲಿ ವಿಜಯನಗರದ ಚಕ್ರವರ್ತಿಗಳು ಶ್ರೀರಂಗಪಟ್ಟಣವನ್ನು ಒಂದು ಪ್ರಾಂತ್ಯವನ್ನಾಗಿ ಮಾಡಿ ಪ್ರಾಂತ್ಯಾಧೀಶನನ್ನು ನಿಯಮಿಸಿದ್ದರು. ವಿಜಯನಗರದ ಪತನಾನಂತರ ಮೈಸೂರಿನ ರಾಜಒಡೆ ಯರು 1610ರಲ್ಲಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಮುಂದೆ 1761ರ ವೇಳೆಗೆ ಹೈದರನು ಪ್ರಾಬಲ್ಯಕ್ಕೆ ಬಂದು ಮೈಸೂರು ರಾಜರನ್ನು ಮೂಲೆಗೊತ್ತಿ ತಾನೇ ಆಡಳಿತ ನಡೆಸತೊಡಗಿದ. ಅನಂತರ ಇವನ ಮಗ ಟಿಪ್ಪು ಅಧಿಕಾರಕ್ಕೆ ಬಂದ. ಇವನ ಕಾಲದಲ್ಲಿ ಈ ಸ್ಥಳ ಸಾಕಷ್ಟು ಅಭಿವೃದ್ಧಿಹೊಂದಿತು. 1799ರಲ್ಲಿ ಟಿಪ್ಪುವಿನ ಮರಣಾನಂತರ ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು.

	ಇಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ ದ್ರಾವಿಡ ಶೈಲಿಯಲ್ಲಿದೆ.  ದೇವಾಲಯದ ಹೆಚ್ಚು ಒಳಭಾಗ ಹೊಯ್ಸಳರ ಕಾಲದ್ದು. ಗರ್ಭಗೃಹ ಮತ್ತು ಸುಕನಾಸಿಗಳ ಚಾವಣಿಗಳ ಮಧ್ಯದಲ್ಲಿ ಪದ್ಮಗಳನ್ನು ಬಿಡಿಸಿದೆ.  ವಿಜಯನಗರ ಕಾಲದ ಗಂಟೆ ಮಾದರಿಯ ಕಂಬಗಳು ನವರಂಗದಲ್ಲಿವೆ.  ನವರಂಗ ದ್ವಾರದ ಬಳಿ ಎರಡು ದೊಡ್ಡ ದ್ವಾರಪಾಲಕ ವಿಗ್ರಹಗಳಿವೆ.  ಮಹಾದ್ವಾರದ ಗೋಪುರ, ಮುಖಮಂಟಪ ಮತ್ತು ಗರ್ಭಗೃಹದ ಗೋಪುರ ವಿಜಯನಗರ ಶಿಲ್ಪ ಲಕ್ಷಣವುಳ್ಳವು. ದೇವಾಲಯದಲ್ಲಿ ಹೊಯ್ಸಳ ಮತ್ತು ವಿಜಯನಗರ ಕಾಲಕ್ಕೆ ಸೇರಿದ ಕೆಲವು ದೇವತೆಗಳ ಋಷಿಗಳ ವಿಗ್ರಹಗಳು ಆಕರ್ಷಕವಾಗಿವೆ.

	ಶ್ರೀರಂಗನಾಥನ ಮುಖ್ಯ ವಿಗ್ರಹ ಬಹು ಆಕರ್ಷಕವಾದದ್ದು. ಶ್ರೀರಂಗನಾಥ ಏಳು ಹೆಡೆಗಳುಳ್ಳ ಆದಿಶೇಷನ ಮೇಲೆ ಪವಡಿಸಿದ್ದಾನೆ. ಶ್ರೀರಂಗನಾಥನ ಪಾದದ ಬಳಿ ಲಕ್ಷ್ಮಿವಿಗ್ರಹವಿದೆ. ಹಾಗೇ ಗೌತಮ ಮುನಿಯ ವಿಗ್ರಹವೂ ಇದೆ. ಇಲ್ಲಿನ ಕೆಲವು ಬೆಳ್ಳಿ ಪದಾರ್ಥಗಳು ಟಿಪ್ಪುಸುಲ್ತಾನ್ ದೇವಾಲಯಕ್ಕೆ ದಾನ ಕೊಟ್ಟಿದ್ದೆಂದು ತಿಳಿದುಬರುತ್ತದೆ. 

	ಇಲ್ಲಿರುವ ಇತರ ದೇವಾಲಯಗಳಲ್ಲಿ ನರಸಿಂಹ ಮತ್ತು ಗಂಗಾಧರೇಶ್ವರ ದೇವಾಲಯಗಳು ಮುಖ್ಯವಾದವು. ನರಸಿಂಹ ದೇವಾಲಯವನ್ನು ಕಂಠೀರವ ನರಸರಾಜ ಒಡೆಯರ್ (1638-59) ಕಟ್ಟಿಸಿದರೆಂದು ತಿಳಿದು ಬರುತ್ತದೆ. ದೊಡ್ಡದಾದ ಗರ್ಭಗೃಹ, ವಿಶಾಲವಾದ ಸುಕನಾಸಿ ಮತ್ತು ಅನೇಕ ಕಂಬಗಳುಳ್ಳ ನವರಂಗವಿದೆ. ಹೊಯ್ಸಳರ ಕಾಲದ ಲಕ್ಷ್ಮೀನರ ಸಿಂಹ ವಿಗ್ರಹ ಬಹು ಅಚ್ಚುಕಟ್ಟಾಗಿ ಕೆತ್ತಿದೆ. ಈ ದೇವಾಲಯದೊಳಗಿರುವ ಅಂಬೆಗಾಲು ಕೃಷ್ಣ ಆಕರ್ಷಣೀಯ. ಇಲ್ಲಿ ಮೂರುವರೆ ಅಡಿ ಎತ್ತರವಿರುವ 17ನೆಯ ಶತಮಾನದ ಕಂಠೀರವ ನರಸರಾಜ ಒಡೆಯರ ವಿಗ್ರಹವಿದೆ. ಸು. 16ನೆಯ ಶತಮಾನದ ಗಂಗಾಧರೇಶ್ವರ ದೇವಾಲ ಯವನ್ನು ಹೊಯ್ಸಳರ ಕಾಲದಲ್ಲಿ ಕಟ್ಟಿದ್ದು. ಈ ದೇವಾಲಯದ ನವರಂಗದಲ್ಲಿ 6 ಮುಖಗಳೂ 12 ಕೈಗಳೂ ಇರುವ ಸುಬ್ರಹ್ಮಣ್ಯ ವಿಗ್ರಹವಿದೆ. ಮಂಟಪದಲ್ಲಿ 18ನೆಯ ಶತಮಾನದ, ಅಂದವಾಗಿ ಬಿಡಿಸಿರುವ 15 ಮಂದಿ ಶಿವಶರಣರ ಮೂರ್ತಿಗಳಿವೆ. ದಳವಾಯಿ ನಂಜರಾಜ (18ನೆಯ ಶತಮಾನ) ಕೊಟ್ಟಿದ್ದೆನ್ನುವ ಒಂದು ತಾಮ್ರದ ಸುಂದರ ದಕ್ಷಿಣಾಮೂರ್ತಿಯ ಚಿತ್ರವಿರುವ ಶಾಸನವಿದೆ.  ರಂಗನಾಥಸ್ವಾಮಿ ದೇವಾಲಯದ ಮುಂಭಾಗದ ಬಳಿ ಮೂರನೆಯ ಕೃಷ್ಣರಾಜ ಒಡೆಯರ ಜನ್ಮಸ್ಥಳವನ್ನು ಸರ್ಕಾರ ರಕ್ಷಿಸಿದ್ದು ಅಲ್ಲೊಂದು ಮಂಟಪವನ್ನು ಕಟ್ಟಿಸಲಾಗಿದೆ.

	ಶ್ರೀರಂಗಪಟ್ಟಣವನ್ನು ಸುತ್ತುವರಿದಿದ್ದ ಗಟ್ಟಿ ಕೋಟೆಯನ್ನು ಈಗಲೂ ಕಾಣಬಹುದು.  ಟಿಪ್ಪುವಿನ ಅರಮನೆ ಎಂದು ಹೇಳುವ ಲಾಲ್‍ಮಹಲ್ ಸಂಪೂರ್ಣ ನಾಶವಾಗಿದೆ. ಖೈದಿಗಳನ್ನು ಕೂಡಿಡುತ್ತಿದ್ದ ಎರಡು ನೆಲಮಾಳಿಗೆ ಬಂದೀಖಾನೆಗಳಿವೆ. ಕೋಟೆಯ ಸುತ್ತ ಕಂದಕವಿದ್ದು ಅದರಲ್ಲಿ ಕಾವೇರಿ ನದಿಯ ನೀರು ತುಂಬುವಂತೆ ಮಾಡಲಾಗುತ್ತಿತ್ತು.  ಕೋಟೆ ಒಳಗಡೆಯೇ ಇರುವ ಜುಮ್ಮಾ ಮಸೀದಿಯನ್ನು 1787ರಲ್ಲಿ ಟಿಪ್ಪು ಕಟ್ಟಿಸಿದ.  ಎರಡು ದೊಡ್ಡ ಮಿನಾರುಗಳಿದ್ದು ಅವುಗಳ ಒಳಗಿನಿಂದ ಮೇಲಕ್ಕೆ ಹತ್ತಿ ಹೋಗಲು ಮೆಟ್ಟಲುಗಳಿವೆ.

	ಇಲ್ಲಿರುವ ಗುಮ್ಮಟವನ್ನು (ಗುಂಬಜ್) ಹೈದರ್ ಅಲಿಯ ಅಪೇಕ್ಷೆ ಯಂತೆ ಟಿಪ್ಪು ಕಟ್ಟಿಸಿದನೆಂದು ಪ್ರತೀತಿ. ಇಲ್ಲಿ ಹೈದರ್, ಅವನ ಪತ್ನಿ ಫಕ್ರುನ್ನೀಸಾಬೇಗಮ್ ಹಾಗೂ ಟಿಪ್ಪುಸುಲ್ತಾನರ ಸಮಾಧಿಗಳಿವೆ. ಇಲ್ಲಿನ ಬೃಹದಾಕಾರದ ಗುಮ್ಮಟ ಅಲಂಕಾರರಹಿತವಾದದ್ದು.  ಕೈಸಾಲೆಯಲ್ಲಿರುವ ಕರಿಯ ಕಂಬಗಳು ಅತಿನುಣುಪಾಗಿ ಬಹು ಆಕರ್ಷಣೀಯವಾಗಿದ್ದು ಬಾಗಿಲುಗಳು ದಂತದ ಕುಶಲ ಕೆತ್ತನೆ ಕೆಲಸಗಳಿಂದ ಕೂಡಿವೆ. 
    						
(ಎ.ಎಸ್.ಎಸ್.)

	ಶ್ರೀರಂಗಪಟ್ಟಣದ ಕೋಟೆ ಹೊರಗಡೆ ಕಾವೇರಿಯ ಉತ್ತರ ದಿಕ್ಕಿನ ಶಾಖೆಗೆ ಹೊಂದಿಕೊಂಡಂತೆ ಒಂದು ವಿಶಾಲ ತೋಟದ ಮಧ್ಯೆ ಇರುವ ಟಿಪ್ಪುಸುಲ್ತಾನ್ ಕಟ್ಟಿಸಿದ (1784) ದರಿಯಾದೌಲತ್ (ಬೇಸಗೆ ಅರಮನೆ) ಸುಂದರವಾದುದು.  ಈ ಅರಮನೆ ಚಿತ್ರಕಲೆಯ ಆಗರ.  ದರಿಯಾದೌಲತ್ ಎಂದರೆ ಸಮುದ್ರಸಂಪತ್ತು ಎಂದರ್ಥ. ಟಿಪ್ಪು ಸಮುದ್ರದವರೆಗೆ ರಾಜ್ಯ ವಿಸ್ತರಿಸಿದ ನೆನಪಿಗೆ ಇದನ್ನು ನಿರ್ಮಿಸಿದನಂತೆ. ಇಲ್ಲಿ ಟಿಪ್ಪು ರಾಯಭಾರಿ ಗಳನ್ನೂ ಮುಖ್ಯ ಅತಿಥಿಗಳನ್ನೂ ಸಂದರ್ಶಿಸುತ್ತಿದ್ದ. ದರಿಯಾದೌಲತ್ ಕಟ್ಟಡ ಎತ್ತರವಾದ ಚೌಕನೆಯ ಜಗತಿಯ ಮೇಲೆ ನಿರ್ಮಿತವಾಗಿದೆ.  ದಪ್ಪನಾದ ಕಮಲದಾಕಾರದ ಮರದ ಕಂಬಗಳೂ ಅರೆಗೋಲಾಕೃತಿಯ ಕಮಾನುಗಳಿಂದಲೂ ಕೂಡಿದೆ. ಇಲ್ಲಿನ ಗೋಡೆಗಳ ಹೊರಗಡೆ ಆಗಿನ ಕಾಲದ ಪ್ರಮುಖ ಘಟನೆಗಳನ್ನು, ಯುದ್ಧಗಳನ್ನು ಸಮಕಾಲೀನ ರಾಜರನ್ನು ಸೂಚಿಸುವ ವರ್ಣಚಿತ್ರಗಳನ್ನು ಬರೆಸಲಾಗಿದೆ. ಒಳಗಿನ ಗೋಡೆಗಳ, ಕಂಬಗಳ ಮತ್ತು ಛಾವಣಿಗಳಲ್ಲಿ ವಿವಿಧ ವರ್ಣದಿಂದಲೂ ಚಿನ್ನದ ಮುಲಾಮಿನಿಂದಲೂ ರಚಿತವಾದ ಎಲೆ, ಬಳ್ಳಿ, ಹೂ, ಮೃಗಪಕ್ಷಿಗಳು ನಿಸರ್ಗಸಹಜವಾಗಿವೆ. ಗಾಳಿ ಬಿಸಿಲಿನ ತಾಪಕ್ಕೆ ಅಳಿಸಿಹೋದ ಇವುಗಳ ಕೆಲವು ಭಾಗಗಳನ್ನೂ 1920ರಲ್ಲಿ ಮತ್ತೆ ಸರಿಪಡಿಸುವ ಕೆಲಸ ಆರಂಭವಾ ಯಿತು. ಈ ಭಿತ್ತಿಚಿತ್ರಗಳನ್ನು 1791ರ ಸುಮಾರಿನಲ್ಲಿ ಬಿಡಿಸಿರಬಹುದೆಂದು ತಿಳಿದುಬರುತ್ತದೆ.

	ಇಲ್ಲಿನ ಚಿತ್ರಗಳಲ್ಲಿನ ವರ್ಣಗಳು ಈಗಲೂ ತಮ್ಮ ಹೊಳಪನ್ನು ಕಳೆದುಕೊಂಡಿಲ್ಲ. ಸಂಶೋಧಕರಾದ ಬೆಂಜಮಿನ್ ಹ್ಯಾರಿ ಅವರು ಪರೀಕ್ಷೆ ನಡೆಸಿ, ಈ ವರ್ಣಗಳನ್ನು ಹೇಗೆ ತಯಾರಿಸಿಕೊಳ್ಳಲಾಯಿತು ಎಂಬುದರ ಬಗ್ಗೆ ಅನೇಕ ವಿವರಗಳನ್ನು ಕೊಟ್ಟಿದ್ದಾರೆ.

	ಇಲ್ಲಿನ ಭಿತ್ತಿಚಿತ್ರಗಳನ್ನು ಕರ್ನಾಟಕದ ಚಿತ್ರಕಾರರು ರಚಿಸಿದ್ದಾರೆ.  ಇವರ ಮೇಲೆ ಪಾಶ್ಚಾತ್ಯ ಚಿತ್ರಕಲೆಯ ಪ್ರಭಾವ ಬಿದ್ದಂತೆ ಭಾಸವಾಗುತ್ತದೆ.  ಇಲ್ಲಿನ ಪಶ್ಚಿಮ ದಿಕ್ಕಿನ ಚಿತ್ರಗಳಲ್ಲಿ ಅಂದಿನ ಯುದ್ಧಗಳ ಸನ್ನಿವೇಶಗಳನ್ನು ಕಾಣಬಹುದು. ಯುದ್ಧಕಾಲದಲ್ಲಿ ಮಿತ್ರನಾದ ನಿಜಾಮನು ಮತ್ತೆ ಬ್ರಿಟಿಷರ ಕಡೆ ಸೇರಿದ್ದರಿಂದ ಟಿಪ್ಪುವಿಗೆ ಅಸಮಾಧಾನವೂ ಕೋಪವೂ ಬಂದಿತು.  ಅದರ ಸಂಕೇತವಾಗಿ ಒಂದು ಚಿತ್ರವನ್ನು ಬರೆಸಿದ. ನಿಜಾಮನ ಸೈನ್ಯದ ದಂಡನಾಯಕನು ಕುದುರೆಯ ಮೇಲೆ ಕುಳಿತಿರುವಂತೆ ಚಿತ್ರಿಸಿ, ಅವನ ಕೆಳಗೆ ಹಸು ಮತ್ತು ಹಂದಿಗಳನ್ನು ಚಿತ್ರಿಸಲಾಗಿದೆ. ನಿಜಾಮನ ಸೈನ್ಯ ಹಸುವಿನಂತೆ ಬಂದು, ಹಂದಿಯಂತೆ ಬ್ರಿಟಿಷರ ಕಡೆ ಸೇರಿಕೊಂಡಿತು ಎಂಬುದರ ಸಂಕೇತವಾಗಿ ಟಿಪ್ಪು ಹೀಗೆ ಚಿತ್ರ ಬರೆಯಿಸಿದನಂತೆ.  ಮತ್ತೊಂದು ಯುದ್ಧಚಿತ್ರದಲ್ಲಿ ಹೈದರ್ ಅಲಿ ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ಸವಾರಿ ಮಾಡುವಂತೆ ಚಿತ್ರಿಸಲಾಗಿದೆ. ಆ ಚಿತ್ರದ ಪಕ್ಕದಲ್ಲಿ ನಿಜಾಮನು ಕುದುರೆಯ ಮೇಲಿರುವಂತೆಯೂ ಅವನ ಹಿಂದೆ ಮುಂದೆ ಸೈನ್ಯ ಇರುವಂತೆಯೂ ಚಿತ್ರಿಸಲಾಗಿದೆ. ಇದು ಎರಡನೆಯ ಮೈಸೂರು ಯುದ್ಧವನ್ನು ಸೂಚಿಸುವ ಚಿತ್ರ. ಇಲ್ಲಿ ಟಿಪ್ಪು ಕುದುರೆಯ ಮೇಲೆ ಕುಳಿತಿದ್ದಾನೆ. ಅವನ ಜೊತೆ ವಿಶ್ವಾಸಘಾತುಕ ನಾದ ಕಾರ್ಯದರ್ಶಿ ಮೀರ್ ಸಾದಕ್ ಇದ್ದಾನೆ. ಧ್ವಜ ಹಿಡಿದ ಫ್ರೆಂಚ್ ಕುದುರೆ ಸೈನ್ಯ ಲಾಲಿಯ ನಿರ್ದೇಶನದಲ್ಲಿ ಮುನ್ನಡೆದಂತೆ ಕಾಣಿಸಲಾಗಿದೆ. ಇಲ್ಲಿಯ ಮತ್ತೊಂದು ಅಪೂರ್ವ ಚಿತ್ರ ಕಾಂಜೀವರಮ್ ಬಳಿಯಲ್ಲಿ ನಡೆದ ಯುದ್ಧದಲ್ಲಿ ಮೈಸೂರಿಗೆ ಜಯವಾದ ಸನ್ನಿವೇಶದ್ದು. ಗಜಾರೋಹಿಗಳಾದ ಹೈದರ್ ಮತ್ತು ಟಿಪ್ಪು ಇಬ್ಬರೂ ತಮ್ಮ ಪಡೆಗಳನ್ನು ನಿರ್ದೇಶಿಸುತ್ತಿರುವಂತೆ ಬಿಡಿಸಲಾಗಿದೆ. ಮೈಸೂರು ಸೈನ್ಯ ಬ್ರಿಟಿಷ್ ಸೈನ್ಯವನ್ನು ಹಿಂದೆ ಮುಂದೆ ಮುತ್ತಿದೆ. ಫ್ರೆಂಚ್ ಫಿರಂಗಿ ದಳ, ಮೈಸೂರು ದಂಡು ಕಾದಾಡಲು ನಿಂತಿವೆ. ಇಂಗ್ಲಿಷ್ ಸೈನಿಕರು, ಕರ್ನಲ್ ಬೇಲಿಯನ್ನು ರಕ್ಷಿಸಲು ವ್ಯೂಹ ರಚಿಸಿದ್ದಾರೆ. ಬೇಲಿ ಚಿಂತಾಗ್ರಸ್ತವಾಗಿರುವಂತೆ ಇರುವ ದೃಶ್ಯ ಮನೋಜ್ಞವಾಗಿದೆ. ದರಿಯಾದೌಲತ್ ಅರಮನೆಯ ಪೂರ್ವದಿಕ್ಕಿನ ಭಿತ್ತಿಯಲ್ಲಿ ಅನೇಕ ರಾಜರನ್ನೂ ನವಾಬರನ್ನೂ ಮತ್ತು ಪಾಳೆಯಗಾರರನ್ನು ಚಿತ್ರಿಸಲಾಗಿದೆ. ಇಲ್ಲಿ ಚಿತ್ರದುರ್ಗದ ಮದಕರಿನಾಯಕನಿಂದ ಕಿತ್ತೂರು ರಾಣಿ ಚೆನ್ನಮ್ನನ ವರೆಗೆ ನೂರಾರು ಪಾಳೆಯಗಾರರಲ್ಲದೆ ಚಿತ್ತೂರು, ತಂಜಾವೂರು, ಕೊಡಗು, ಔಧ್, ಆರ್ಕಾಟ್, ಕಡಪ ಮೊದಲಾದ ಆಳರಸರ ಚಿತ್ರಗಳು ಇವೆ. ಶ್ರೀರಂಗಪಟ್ಟಣ ಬ್ರಿಟಿಷರ ವಶವಾದ ಮೇಲೆ ವೆಲ್ಲೆಸ್ಲಿ ಇಲ್ಲಿ ವಾಸಿಸುತ್ತಿದ್ದ. ಡಾಲ್‍ಹೌಸಿ ಇದನ್ನು ಸಂದರ್ಶಿಸಿದಾಗ ಮಾಸಿಹೋಗಿದ್ದ ಚಿತ್ರಗಳನ್ನು ಮತ್ತೆ ಹೊಸದಾಗಿ ಚಿತ್ರಿಸಿದಂತೆ ತಿಳಿದು ಬರುವುದು. ಪೂರ್ವದ ಗೋಡೆಮೇಲಿರುವ ಮುಮ್ಮಡಿ ಕೃಷ್ಣರಾಜ ಒಡೆಯರ ಚಿತ್ರ ಈ ಕಾಲಕ್ಕೆ ಸೇರಿದ್ದಿರಬಹುದು. 1959ರಲ್ಲಿ ದರಿಯಾ ದೌಲತ್ ಅರಮನೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಯಿತು. ಇಲ್ಲಿ ಹೈದರ್ ಹಾಗೂ ಟಿಪ್ಪುವಿಗೆ ಸೇರಿದ ವರ್ಣಚಿತ್ರಗಳೂ ಲಿಥೋ ಚಿತ್ರಗಳೂ ನಿಸರ್ಗಚಿತ್ರಗಳೂ ತೈಲವರ್ಣದ ಭಾವಚಿತ್ರಗಳೂ ಇವೆ. ಟಿಪ್ಪುವಿನ ಕೈಕೆಳಗೆ ಸೇವೆ ಸಲ್ಲಿಸಿದ ಅಧಿಕಾರಿಗಳ ಹಾಗೂ ಆತನ ಏಳು ಜನ ಗಂಡುಮಕ್ಕಳ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.   
				
	(ಎಮ್.ಎಚ್.; ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ